1950 ರ ದಶಕದಲ್ಲಿ ಹೊನ್ನಾವರ ನಗರ ಹಾಗೂ ಸುತ್ತ-ಮುತ್ತಲಿನ ಗ್ರಾಮೀಣ ಭಾಗದ ಜನರು ಉನ್ನತ ಶಿಕ್ಷಣಕ್ಕಾಗಿ ದೂರದ ನಗರಗಳಿಗೆ ಹೋಗಬೇಕಾಗಿತ್ತು. ಈ ಪರಿಸ್ಥಿತಿಯನ್ನು ಹೋಗಲಾಡಿಸಲು ಶಿಕ್ಷಣ ಪ್ರೇಮಿಗಳಾದ ದಿ| ಶ್ರೀ ಆರ್.ಎಸ್. ಹೆಗಡೆಯವರ ನೇತೃತ್ವದಲ್ಲಿ 1963ರಲ್ಲಿ ಎಂ.ಪಿ.ಇ. ಸೊಸೈಟಿ ಸ್ಥಾಪನೆಗೊಂಡಿತು. 1964ರಲ್ಲಿ ಎಂ.ಪಿ.ಇ. ಸೊಸೈಟಿಯ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಪ್ರಾರಂಭವಾಗಿ 1976ರಲ್ಲಿ ವಾಣಿಜ್ಯ ಶಿಕ್ಷಣವನ್ನು ಆರಂಭಿಸಲಾಯಿತು. ದಿ| ಆರ್.ಎಸ್. ಹೆಗಡೆಯವರು ಸಂಸ್ಥಾಪಕ ಅಧ್ಯಕ್ಷರಾಗಿಯೂ ಮತ್ತು ನಾಡಿನ ಖ್ಯಾತ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರಾದ ದಿ| ಶ್ರೀ ವಿ. ಸೀತಾರಾಮಯ್ಯನವರು ಪ್ರಥಮ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಮಹಾವಿದ್ಯಾಲಯಕ್ಕೆ ಭದ್ರ ಬುನಾದಿಯನ್ನು ಒದಗಿಸಿದರು. ಸಂಸ್ಥೆಯ ಬೆಳವಣಿಗೆಯಲ್ಲಿ ಅವಿರತವಾಗಿ ಶ್ರಮಿಸಿದ ಪ್ರಮುಖರೆಂದರೆ ದಿ|ಡಾ||ಎಂ.ಪಿ. ಕರ್ಕಿಯವರು, ದಿ| ಶ್ರೀ ಆರ್. ಎನ್.ಕಾಮತರು, ದಿ| ಡಾ|| ವಿ.ಕೆ.ಬಳ್ಕೂರರು, ದಿ|| ಶ್ರೀ ಎಂ.ಎಂ, ಜಾಲಿಸತ್ಗಿಯವರು, ದಿ|ವಿ.ಜಿ.ಕೈಕಟ್ಗೇರಿ ಮತ್ತು ದಿ|ಶ್ರೀ ಜಿನದತ್ತ ಗೌಡರು ಮುಂತಾದ ಗಣ್ಯವ್ಯಕ್ತಿಗಳು. ಸಂಸ್ಥೆಯ ಆರ್ಥಿಕ ಸಂಕಷ್ಟದಲ್ಲಿದ್ದಾಗ ಆಪತ್ಭಾಂದವರಂತೆ ಸಂಸ್ಥೆಗೆ ಸಹಾಯ ಮಾಡಿದವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರು. ಅಲ್ಲಿಂದ ಮುಂದೆ ನಮ್ಮ ಮಹಾವಿದ್ಯಾಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ ಎಂಬ ಹೆಸರನ್ನು ಪಡೆಯಿತು. ಡಾ| ವೀರೇಂದ್ರ ಹೆಗ್ಗಡೆಯವರ ನಿರಂತರ ಮಾರ್ಗದರ್ಶನ ಮತ್ತು ಸಹಾಯಹಸ್ತ ಹಾಗೂ ಶ್ರೀ ಮಂಜುನಾಥಸ್ವಾಮಿಯ ಅನುಗ್ರಹ ಸದಾಕಾಲ ಸಂಸ್ಥೆಗೆ ನೆರವಾಗಿದೆ. ಶ್ರೀ ಕೃಷ್ಣಮೂರ್ತಿ ಭಟ್ಟ, ಶಿವಾನಿ ಇವರ ಸಮರ್ಥ ಮುಂದಾಳತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾಪುರಸ್ಕಾರ, ವಿದ್ಯಾಸಂಜೀವಿನಿ ಮತ್ತು ಮಧ್ಯಾಹ್ನದ ಬಿಸಿಯೂಟ ಮುಂತಾದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯೊನ್ಮುಖವಾಗಿದೆ. ಅಂದು ಕೇವಲ 164 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆಯಲ್ಲಿ ಇಂದು ಪದವಿ ಕಾಲೇಜಿನ ವಿವಿಧ ವಿಭಾಗದಲ್ಲಿ 1000 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪದವಿ ಹಂತದಲ್ಲಿಯೇ ಸಂಶೋಧನೆಗೆ ತೊಡಗಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲು ಸ್ನಾತಕ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಶಿಕ್ಷಣವು ವಾಣಿಜ್ಯೀಕರಣವಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲೂ ಕನಿಷ್ಠ ಶುಲ್ಕಕ್ಕೆ ಗರಿಷ್ಠ ಗುಣಮಟ್ಟದ ಶಿಕ್ಷಣ ನೀಡುತ್ತಿರುವದು ನಮ್ಮ ಸಂಸ್ಥೆಯ ಹೆಗ್ಗಳಿಕೆಯಾಗಿದೆ.