ಈ ಮಹಾವಿದ್ಯಾಲಯದ ಲಾಂಛನದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಬ ಹೆಸರು ಮಹಾವಿದ್ಯಾಲಯದ ಅಸ್ಮಿತೆಯನ್ನು ಸಾರುತ್ತ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಿದೆ.
ಲಾಂಛನದ ಆವಾರದೊಳಗಿರುವ ಅರಳುತ್ತಿರುವ ಕಮಲವು ವಿದ್ಯೆಯನ್ನು ಹಂಬಲಿಸಿ ಬಂದ ವಿದ್ಯಾರ್ಥಿಗಳಿಗೆ ತಮ್ಮ ಹೃದಯ ಕಮಲವನ್ನು ಅರಳಿಸಿಕೊಂಡು ಭಾವನಾತ್ಮಕ ಹಾಗೂ ಭೌದ್ಧಿಕ ವಿಕಾಸಕ್ಕೆ ಇಲ್ಲಿರುವ ಅವಕಾಶವನ್ನು ದೃಢೀಕರಿಸುತ್ತದೆ. ಬೆಳಗುತ್ತಿರುವ ಹಣತೆಯು ಇಲ್ಲಿರುವ ಅನುಭವಿ ಹಾಗೂ ಪ್ರತಿಭಾವಂತ ಅಧ್ಯಾಪಕ ಸಮುದಾಯದ ಜ್ಞಾನದಾನ ಪ್ರಕ್ರಿಯೆಯ ಸಂಕೇತವಾಗಿದೆ. ಉದಯಿಸುತ್ತಿರುವ ಸೂರ್ಯ ಜ್ಞಾನೋದಯದ ಭರವಸೆಯನ್ನು ನೀಡುತ್ತದೆ. ತೆರೆದಿಟ್ಟ ಪುಸ್ತಕವು ಭೇದಭಾವವಿಲ್ಲದೆ ಸರ್ವರಿಗೂ ಮಹಾವಿದ್ಯಾಲಯಕ್ಕೆ ಮುಕ್ತ ಆಹ್ವಾನವನ್ನು ನೀಡುತ್ತಿದೆ.
ಅಡಿಯಲ್ಲಿ ಬರೆದಿರುವ “ಸಾ ವಿದ್ಯಾಯಾ ವಿಮುಕ್ತಯೇ” ಎಂಬ ವ್ಯಾಸವಾಕ್ಯವು ಸಂಸ್ಥೆಯ ಘೋಷ ವಾಕ್ಯವಾಗಿದ್ದು, ಸಂಸ್ಥೆಯ ಆಶಯವನ್ನು ಸಾರುತ್ತಿದೆ. ಈ ಅಮರವಾಣಿಯು ಇಲ್ಲಿ ನೀವು ಪಡೆಯುವ ವಿದ್ಯೆಯು ನಿಮ್ಮ ಭಾವವನ್ನು ಅರಳಿಸಿ ಬುದ್ಧಿಯನ್ನು ಹೆಚ್ಚಿಸಿ, ಹೃದಯವಂತರನ್ನಾಗಿಸಿ ವ್ಯಕ್ತಿತ್ವದ ಸರ್ವತೋಮುಖ ವಿಕಾಸವನ್ನು ಉಂಟು ಮಾಡಲಿ ಎಂಬ ಸಂಸ್ಥೆಯ ಆಶಯವನ್ನು ಸೂಚಿಸುತ್ತದೆ.
ಈ ಸಂಸ್ಥೆಯ ಉದಾತ್ತ ಧ್ಯೇಯ-ಧೋರಣೆಗಳ ಮೂರ್ತ ಸ್ವರೂಪವಾಗಿರುವ ಈ ಲಾಂಛನವು ತಮ್ಮೆಲ್ಲರ ಸಾಧನೆಗಳಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇವೆ.